Skip to content Skip to footer

ಕೊರಗಜ್ಜ ಮತ್ತು ಗುಳಿಗಜ್ಜ ದೈವಗಳು

ತುಳುನಾಡಿನ ಅತ್ಯಂತ ಕಾರಣೀಕ ಶಕ್ತಿ ಭಕ್ತರಿಂದ ಪ್ರೀತಿ ಗೌರವದಿಂದ ಅಜ್ಜನೆಂದೇ ಕರೆಯಲ್ಪಡುವ ಕೊರಗತನಿಯ ದೈವವೇ ಇಲ್ಲಿನ ಅಧಿಪತಿಯಾಗಿ ನೆಲೆಸಿರುತ್ತಾರೆ. ಪಾರ್ದನದ ಪ್ರಕಾರ ಕೊರಗರ ಕೊಪ್ಪದಲ್ಲಿ ತನಿಯ ಎಂಬ ಹೆಸರಿನಲ್ಲಿ ಆಚು ಮೈರೆ ಪಣಂಬೂರ ಓಡಿ (ಒರವನ ಓಡಿಜನಿಸಿ) ದಂಪತಿಗೆ ಜನಿಸಿ, ಕಿರುವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ಕೊನೆಗೆ ತಂದೆಯೂ ಕೊನೆಯುಸಿರೆಳೆದಾಗ, ಕೊರಗರ ಸಂತಾನ ಅಳಿಯುತ್ತ ಹೋದಾಗ ಕೊಪ್ಪವನ್ನು ತೊರೆದು, ಅನಾಥ ಸ್ಥಿತಿಯಲ್ಲಿ ಕುಳಿತಿದ್ದಾಗ ಎಣ್ಣುರ ಬರ್ಕೆಯ ಮೈರಕ್ಕೆ ಬೈದೆತಿಯನ್ನು ಕಂಡು ಅವನನ್ನು ವಿಚಾರಿಸಿ, ತಮ್ಮ ಮನೆಯಲ್ಲಿ ಆಶ್ರಯ ನೀಡಲು ಅವನನ್ನು ಎನ್ನೂರ ಬರ್ಕೆಗೆ ಕರೆತರುತ್ತಾರೆ. ಆ ಸಂದರ್ಭದಲ್ಲಿ ಹೊಟ್ಟೆಗೆ ಊಟ, ಉಡಲು ಬಟ್ಟೆ, ಕೂರಲು ನೆಲೆ ಕಲ್ಪಿಸಿದ ಮೈರಕ್ಕೆ ಬೈದೆತಿಯ ಬರ್ಕೆಯಲ್ಲಿ ತನ್ನ ಕೈಲಾಗುವಷ್ಟು ಕೆಲಸವ ಮಾಡುತ್ತಾ ಇರುತ್ತಾನೆ. ಅದೇ ಕಾಲದಲ್ಲಿ ಒಂದೊಮ್ಮೆ ಮೈರಕ್ಕೆ ತನ್ನ ಶೇಂದಿಯ (ಕಲಿ) ಮಡಕೆಯನ್ನು ತನಿಯನ ತಲೆಯಲ್ಲಿ ಕರೆತರುವಾಗ ವಿಸ್ಮಯವೆಂಬಂತೆ ಆ ಮಡಕೆಯ ಶೇಂದಿ ಎಷ್ಟು ತೆಗೆದರೂ ಇಂಗುಹೋಗುವುದಿಲ್ಲ. ಆಗ ಮಡಕೆಯ ಶೇಂದಿ ಮುಗಿದರೆ ಮಾಡದ ಮೈಸಂದಾಯ ಕನ್ಯಾವು ಲೆಕ್ಕೇಸಿರಿ (ರಕ್ತಶ್ವರಿ) ದೈವಗಳಿಗೆ ಏಳು ಹೊರೆ (ಪುದೆ) ತೆಂಗಿನ ಗರಿ ಮತ್ತು ಸೀಯಾಳ (ಸಿರಿ-ಬೊಂಡ) ವನ್ನು ಹರಕೆ ಹೇಳಿದೊಡನೆ ಮಡಕೆಯ ಶೇಂದಿ ಮುಗಿಯುತ್ತದೆ. ಇನ್ನೂ ಈ ಹೊರೆಯನ್ನು ಒಪ್ಪಿಸಲು ಯಾರು ಹೋಗುವರೆಂದು ಹುಡುಕುವಾಗ ಯಾರೂ ಸಿಗದಿರಲು 16ನೇ ವಯಸ್ಸಿನ ತನಿಯನು ತಾನೇ ಹೊರುವೆನೆಂದು ಹೇಳಿ ಅಂತೆಯೇ ಏಳೂರು ಹೊರುವಷ್ಟನ್ನು ತಾನೇ ಹೊತ್ತುಕೊಂಡು ದೈವಸ್ಥಾನದತ್ತ ಹೋಗುತ್ತಾನೆ. ದೈವಸ್ಥಾನದ ಚಾಕಿರಿಯ ಜನರು ತನಿಯ ಬೊಂಡ ತರುವುದನ್ನು ಕಂಡು  ಕೀಳುಜಾತಿಯವನೆಂಬ ನಿಟ್ಟಿನಲ್ಲಿ ಅವನನ್ನು ಹೊರಗೆಯೇ ನಿಲ್ಲಿಸಿದರು. ಅದೇ ಸಂದರ್ಭದಲ್ಲಿ ತನಿಯನಿಗೆ ಮರವೊಂದರಲ್ಲಿ ನಾರಂಗಾಯಿ ಮಾಪಲದ ಹಣ್ಣು ಕಾಣಸಿಕ್ಕಿದ್ದರಿಂದ ತನ್ನ ತಾಯಿ ಮೈರಕ್ಕೆಗೆ ಉಪ್ಪಿನಕಾಯಿಗೆ ಆದೀತು ಎಂದು ಅದನ್ನು ಕೊಯ್ಯಲೆಂದು ದೈವದ ಗರ್ಭಗುಡಿಯ ಮೇಲೇರಿ ಮುಗುಳಿ (ಕಲಶ/ಕುಂಭ) ಗೆ ಕೈ ಹಾಕಿದೊಡನೆ ಮಾಡದ ಮೈಸಂದಾಯ ಲೆಕ್ಕೇಸಿರಿ ದೈವಗಳು ಅವನನ್ನು ಮಾಯ ಮಾಡುತ್ತಾರೆ ಎಂದು ಪಾರ್ದನದಲ್ಲಿ ಹೇಳಲಾಗುತ್ತದೆ (ವ್ಯತ್ಯಾಸ ಇರಬಹುದು).
ಆ ರೀತಿ ಮಾಯಕ್ಕೆ ಸಂದ ಕೊರಗತನಿಯ ಮಂಗಳೂರು ಸಾವಿರ ಸೀಮೆ ದೈವವು ದಾಟಿ ಮಂಗಳಾದೇವಿಯನ್ನು ಭೇಟಿ ಮಾಡಿ ಅಲ್ಲಿಂದ ನೇತ್ರಾವತಿ ನದಿ ದಾಟಿ (ಅಡ್ಡಂದ ಸುದೆ) ಕಲ್ಲಾಪುವಿಗೆ ಬಂದು ಅಲ್ಲಿ ಬುರ್ದುಗೋಳಿ ಎಂಬ ಜಾಗದಲ್ಲಿ ಗುಳಿಗನೊಡನೆ ಒಡಂಬಡಿಕೆ ಆಗುತ್ತದೆ.
ಆ ಸಂದರ್ಭದಲ್ಲಿ ಸಾರ್ಲಪಟ್ಟದಲ್ಲಿ ರಾಜನ್ ದೈವಗಳಾದ ಪಂಜಂದಾಯ బంటి ದೈವಗಳು ಕಲೆಕಾರ್ಣಿಕ ಮೆರೆಯುವ ಸಂದರ್ಭದಲ್ಲಿ, ಉದ್ಯಾವರದ ಅಣ್ಣ ತಮ್ಮ ಅರಸು ದೈವಗಳು ತನ್ನ ಸ್ಥಾನ ವಿಸ್ತರಿಸುತ್ತ ಸಾರ್ಲಪಟ್ಟಕ್ಕೆ ಲಗ್ಗೆಯಿಟ್ಟಾಗ, ಈ ಅರಸು ದೈವಗಳಿಗೂ ಪಂಜಂದಾಯ ದೈವಗಳಿಗೆ ಕೊಲಲ (ಯುದ್ಧ) ನಡೆದು, ಅದರಲ್ಲಿ ಅರಸುದೈವಗಳ ಕೈಮೇಲಾಗಿರುತ್ತದೆ. ಇದೇ ಹೊತ್ತಿಗೆ ಕೊರಗತನಿಯ ಪಂಜಂದಾಯ ದೈವಗಳನ್ನು ಭೇಟಿ ಆದಾಗ ನಡೆದ ಯುದ್ಧದ ಕುರಿತು ತಿಳಿದು, ಕಳೆದುಹೋದ ರಾಜನ್ ದೈವಗಳ ಸಾರ್ಲಪಟ್ಟದ ಅಧಿಕಾರವನ್ನು ತಾನು ಹಿಂಪಡೆದು ನೀಡುವೆನೆಂದು ಬಲುಭಾಷೆಯನ್ನು ನೀಡುತ್ತಾನೆ. ಆಗ ಮೊದಲು ಪಂಜಂದಾಯ ದೈವಗಳು ನಿನ್ನಿಂದ ಆಗುವುದೇ ಎಂದರೂ ಕೊನೆಗೆ, ತಮ್ಮ ಸ್ಥಾನಮಾನ ಮರಳಿ ನೀಡಿದರೆ ನಿನಗೆ ನಮ್ಮ ಸಾರ್ಲಪಟ್ಟದಲ್ಲಿ ಏಳು ಕಡೆಗಳಲ್ಲಿ ಕೋಲ ಸೇವೆ ಮನೆ ಮನೆಗಳಲ್ಲಿ ಅಗೇಲು ಸೇವೆ (ಊರುಡು ಅಗೆಲ್; ಕಾಡುಡು ಮೆಚ್ಚಿ) ಎಂಬ ವಾಗ್ದಾನ ನೀಡುತ್ತಾರೆ. ಅಂತೆಯೇ ಕೊರಗತನಿಯನು ಕುತ್ತಾರಗುತ್ತುವಿಗೆ ಪ್ರವೇಶಿಸಿ ಅಲ್ಲಿ ಮಾಯದಿಂದ ಕಪಿಲ ಹಸುವಿನ ಮಾಂಸವನ್ನು ತನ್ನ ಬುಟ್ಟಿಯಲ್ಲಿ ಹಾಕಿಕೊಂಡು ಅರಸು ದೈವಗಳನ್ನು ಬಾರ್ದಕಟ್ಟೆ ಎಂಬಲ್ಲಿ ಅಡ್ಡಹಾಕಿ ಆ ಅರಸುದೈವಗಳ ಎದುರಿನಲ್ಲಿ ಮಾಂಸವನ್ನು ಎಸೆದಾಗ ಹಿಂದೆ ಸರಿಯುತ್ತ ಹೋಗುತ್ತಾರೆ. ಅಂತೆಯೇ ಕನೀರ್ತೋಟ ಎಂಬಲ್ಲಿನವರೆಗೆ ಓಡಿಸಿ ಅಲ್ಲಿ ಮಲಯಾಳ ಚಾಮುಂಡಿ ಹಾಗೂ ಅರಸು ದೈವಗಳು ಸೋಮನಾಥನಲ್ಲಿ ಮೊರೆಹೋದಾಗ ವೈದ್ಯನಾಥ ದೈವವು ಅಲ್ಲಿಗೆ ಬಂದು ನ್ಯಾಯವನ್ನು ಸರಿಪಡಿಸಿ, ಸಾರ್ಲಪಟ್ಟ (ಬೆಂಗೋಡಿ ಅಣೆಯಿಂದ ಜಮಾತ್ ನವರೆಗೆ) ಪಂಜಂದಾಯ ದೈವಕ್ಕೆ ಇರಲಿ ಎಂದು ತೀರ್ಮಾನ ನೀಡುತ್ತಾನೆ. ಅಂತೆಯೇ ಕಳೆದುಹೋದ ಅಧಿಕಾರವನ್ನು ಮರಳಿ ನೀಡಿದ ಕೊರಗತನಿಯ ದೈವಕ್ಕೆ ಸಾರ್ಲಪಟ್ಟದಲ್ಲಿ ಏಳು ಕಡೆಗಳಲ್ಲಿ ದೆಕ್ಕಾಡ್, ಬೊಲ್ಯ, ದೇರಳಕಟ್ಟೆ, ತಲ, ಉಜಿಲ, ಮಿತ್ತಗೆಲ ಮತ್ತು ಸೋಮೇಶ್ವರ ಎಂಬಲ್ಲಿ ಕಾಡುಪ್ರದೇಶದ ಮಧ್ಯದಲ್ಲಿ ಕೋಲಸೇವೆ ನಡೆಸುವುದಾಗಿ ಪಂಜಂದಾಯ ದೈವವು ಅಪ್ಪಣೆ ನೀಡುತ್ತಾರೆ. ಅಂತೆಯೇ ಸಾರ್ಲಪಟ್ಟದಲ್ಲಿ ಪ್ರಧಾನ ನಡತಿಪಟ್ಟ ಅಂದರೆ ಕಾರಣಿಕ ತೋರಿಸುವ ದೈವವಾಗಿ ಮೆರೆಯುತ್ತಾರೆ.
ಆನಂತರ ಕೊರಗತನಿಯನು ದೈವನುಡಿಯಂತೆ ‘ಕನ್ನಡಕೆರೆಯಿಂದ ಬಾರ್ದಕಟ್ಟೆಗೆ ಉಲ್ಲಾಯ ಸವಾರಿ ಬಿಟ್ಟ ಸತ್ಯ ; ಮಹಾವಿಷ್ಣು ಜುಮಾದಿ ವಲಸಾರಿ ಜಾಗದಲ್ಲಿ; ರಕೇಶ್ವರಿ (ಲೆಕ್ಕೇಸಿರಿ) ಮಾಡದ ಅಡಿಯಲ್ಲಿ ಏಳ್ಳರು ಸಿರಿಗಳನ್ನು ಕಾಯುವ ದೈವ’ ಎಂಬ ಕಟ್ಟುಕಟ್ಟಳೆಯನ್ನು ಕಾಣಬಹುದಾಗಿದೆ. ಅಂತೆಯೇ ಏಳ್ಳರು ಸಿರಿಗಳನ್ನು ಕಾಯುತ್ತ ಬೆರ್ಮರು (ಉಲ್ಲಾಯ) ರಕ್ತಶ್ವರಿ (ಲೆಕ್ಕೇಸಿರಿ) ದೈವಗಳ ಮಾಡದ ಅಡಿಯಂಗಣದಲ್ಲಿಯೇ ಗುಳಿಗಜ್ಜನನ್ನು ಕೂಡಿಕೊಂಡು ಬಹು ಕಾರಣೀಕ ಶಕ್ತಿಯಾಗಿ ಇಲ್ಲಿ ಕೊರಗಜ್ಜನಾಗಿ ಮೆರೆಯುತ್ತಿರುವನು.
ಕೊರಗಜ್ಜನ ಪಾತ್ರನದಲ್ಲಿ ತಿಳಿಸಿದಂತೆ ಕನ್ನಡ ಕೆರೆಯಿಂದ ಬಾರ್ದಕಟ್ಟೆಯವರೆಗೆ ಸವಾರಿ ಬಿಟ್ಟ ಸತ್ಯ ಆಗಿ, ಶ್ರೀಮಹಾವಿಷ್ಣು ಧೂಮಾವತಿ ಕ್ಷೇತ್ರದ ವಲಸರಿ ಜಾಗದಲ್ಲಿ ಹಾಗೂ ರಕೇಶ್ವರಿ ಅಮ್ಮನ ಮಾಡದ ಅಡಿಯಲ್ಲಿ ಮೆರೆಯುವ ಶಕ್ತಿ ಏಳ್ವರ್ ಸಿರಿಗಳನ್ನು ಕಾಯುವ ಸತ್ಯ ಆಗಿರುತ್ತಾರೆ.
ಈ ಏಲ್ಲಾ ವಿಚಾರಗಳು ಕಂಡು ಬರುವುದು ಈಗ ತಾನೆ ಜೀರ್ಣೋದ್ದಾರಗೊಳ್ಳುತ್ತಿರುವ ಆದಿಸ್ಥಳ ಶ್ರೀ ರಕೇಶ್ವರಿ ಬೆರ್ಮರ್ ಏಳ್ವರ್ ಸಿರಿಗಳು ಕೊರಗಜ್ಜ ಕ್ಷೇತ್ರ ಕುತ್ತಾರಿನಲ್ಲಿ. ಕೊರಗಜ್ಜನ ಮೂಲಸ್ಥಳವೆಂದೇ ಕರೆಯಲ್ಪಡುವ ಈ ಕ್ಷೇತ್ರಕ್ಕೆ ಸಂಬಂಧ ಪಟ್ಟ 16 ಮನೆತನಗಳಿವೆ. ಇಲ್ಲಿ ಕಂಡುಬರುವ ವಿಚಾರಗಳು ಬೇರೆ ಯಾವ ಪ್ರದೇಶಲ್ಲೂ ಕಂಡು ಬರುವುದಿಲ್ಲ. ಹಾಗಾಗಿ ಶ್ರೀ ಕ್ಷೇತ್ರವು ಕೊರಗಜ್ಜನ ಆದಿಸ್ಥಳವಾಗಿದೆ.
ಪ್ರಸ್ತುತ ಶ್ರೀ ಕ್ಷೇತ್ರದ ಜೀರ್ಣೋದ್ದಾರದ ಜವಾಬ್ದಾರಿಯ ಹೊರೆಯನ್ನು ಪಟ್ಟದ ಕೊರಗಜ್ಜನೇ ಹೊರಿಸಿರುತ್ತಾರೆ. ಶ್ರೀ ಕ್ಷೇತ್ರದ ಜೀರ್ಣೋದ್ದಾರದ ಕೆಲಸಗಳು ಭರದಿಂದ ಸಾಗುತ್ತಿದ್ದು ಬ್ರಹ್ಮಕಲಶದ ನಂತರದಲ್ಲಿ ರಕ್ತಶ್ವರಿ ಅಮ್ಮನಿಗೆ ಧರ್ಮ ನಡಾವಳಿ ಸೇವೆ ಹಾಗೂ ಸಿರಿಗಳಿಗೆ ಸಿರಿ ಜಾತ್ರೆ ಹಾಗೂ ಕೊರಗಜ್ಜನಿಗೆ ನಿತ್ಯ ಕೋಲದ ಸೇವೆ ಜರಗಲಿರುವುದು.

All Rights Reserved.