Skip to content Skip to footer

Shree Raktheshwari

SRI RAKTESHWARI AMMA

ಶ್ರೀ ರಕ್ತಶ್ವರಿ (ಲೆಕ್ಕೇಸಿರಿ)

ಪ್ರಧಾನ ಸಾನಿಧ್ಯ: ಶ್ರೀ ರಕ್ತಶ್ವರಿ (ಲೆಕ್ಕೇಸಿರಿ) ದೈವ ತುಳುವರಲ್ಲಿ ಆದಿಮೂಲದ ದೈವವೆಂದೇ ಗುರುತಿಸಲಾದ ಭೂಮಿ ತೂಕಂದ ಕನ್ಯಾವು ಸತ್ಯ ಎಂಬ ಪುರಾಪು ಪಡೆದ ಕಾರಣೀಕ ಶಕ್ತಿಯೇ ಲೆಕ್ಕೇಸಿರಿ ಅಥವಾ ರಕೇಶ್ವರಿ ದೈವ. ಈ ಶಕ್ತಿಯ ಮೂಲದ ಕುರಿತಾಗಿ ತುಳುನಾಡಿನಲ್ಲಿ ಪ್ರಚಲಿತವಿರುವ ನಂಬಿಕೆ ಏನೆಂದರೆ ಎಲ್ಲಿ ಪ್ರಾಕೃತಿಕ ಸೊಗಡುಳ್ಳ ಜಲಸಂಪತ್ತಿನಿಂದ ಕಂಗೊಳಿಸುವ ಅಥವಾ ಬೆಳೆ ಕೃಷಿಗಳು ತುಂಬಿತುಳುಕುತ್ತಿದೆಯೋ ಅಲ್ಲಿ ಈ ದೈವವು ತಾನಾಗಿಯೇ ಉದಿಸಿ ಬರುವಳು ಎಂದು ನಂಬಲಾಗುತ್ತದೆ. ಒಂದೆಡೆಯಲ್ಲಿ ಶಕ್ತಿಯು ಆದಿಶಕ್ತಿಯ ಮಾತೃಸ್ವರೂಪಿ ದೇವಿ ಎಂಬ ನಂಬಿಕೆ ಇದ್ದರೂ ಇನ್ನೊಂದೆಡೆ ತುಳುನಾಡಿನ ಕಟ್ಟುಕಟ್ಟಳೆಯಲ್ಲಿ ಪ್ರಧಾನ ದೈವವಾಗಿ ಬಹುತೇಕ ಊರುಗಳಲ್ಲಿ ಆರಾಧನೆ ನಡೆಯುತ್ತದೆ. ಒಂದು ಹಿನ್ನೆಲೆ ಪ್ರಕಾರ ಮುಜೂರು ಪಡಂಗಡಿ ಬಾಳೊಲಿಗಳ ಕಾಲದಲ್ಲಿ ಬಾನು ಸೇನವ ಎಂಬವರ ಮುಖೇನ ವಿಜೃಂಭಣೆಯ ನೇಮ ನಡಾವಳಿ ಪಡೆದು ಅರಸು ದೈವವಾಗಿ ಮಾತ್ರವಲ್ಲದೆ ಹಲವಾರು ಕಡೆಗಳಲ್ಲಿ ಮೂಜಿಲ್ನಾಯ, ಬನ್ನಡ್ಕತ್ತಾಯ, ಅರಸು ಪಡ್ಡೆಟ್ಟುನಾರ್, ರಾವುದ ಕುಮಾರೆ ಇತ್ಯಾದಿ ನಾಮಾಂಕಿತದಿಂದಲೂ ಉತ್ಸವ ಪಡೆವ ದೈವವೂ ಲೆಕ್ಕೇಸಿರಿಯೇ ಆಗಿದೆ. ಹಾಗೂ ಅನೇಕ ಕಡೆಗಳಲ್ಲಿ ಒಂದು ಕೋಲಿನ ಮಾಡದಲ್ಲಿ ಕುದುರೆಯೇರಿರುವ ಕಡ್ನಲೆ ಅಡ್ಡನ (ಗುರಾಣಿ) ಹಿಡಿದ ಸಮರದೇವತೆಯಾಗಿಯೂ ರಕ್ತಶ್ವರಿಯ ಆರಾಧನೆ ನಡೆಯುತ್ತದೆ. ಅಂತಹ ಕಾರಣೀಕ ಶಕ್ತಿಯು ತಾನಾಗಿಯೇ ಉದ್ಭವಿಸಿದ ಪುಣ್ಯಸ್ಥಳವೇ ಶ್ರೀ ಕ್ಷೇತ್ರ ಕುತ್ತಾರು. ಮೂಲಶಕ್ತಿ ಎಂದೇ ಗೋಚರವಾದ ಈ ದೈವಕ್ಕೆ ಪೂರ್ವದಲ್ಲಿ ಮಾಡದಲ್ಲಿ ಸಮರದೇವತೆಯಂತೆ ವಿಶೇಷ ರೀತಿಯಲ್ಲಿ ಆರಾಧನೆ ನಡೆಯುತ್ತಿತ್ತೆಂದು ಕಂಡುಬಂದಿರುತ್ತದೆ.
ಕಾಲ ಚಕ್ರದ ತುಳಿತದಿಂದಾಗಿ ಕುತ್ತಾರಿನ ಮೂಲ ಮಣ್ಣಿನಲ್ಲಿ ತಾಯಿಯ ಆರಾಧನೆ ನಿಂತ ಕಾರಣ ತಾಯಿಯು ತಮ್ಮ ಭಂಡಾರದ ಮನೆಯಿಂದ ಉಳ್ಳಾಲದ ಪ್ರದೇಶಕ್ಕೆ ತೆರಳಿದರು.
ತಾಯಿಯು ಪ್ರಸ್ತುತ ಉಳ್ಳಾಲದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಆರಾಧನೆ ಪಡೆಯುತ್ತಿದ್ದು ಕ್ರಮೇಣ ಉಳ್ಳಾಲ ಉಳಿಯ ಕ್ಷೇತ್ರದ ಉಳ್ಳಾಳಿ ಅಮ್ಮನವರ ಗದ್ದುಗೆಯಲ್ಲಿ ಒಟ್ಟಿಗೆ ಆರಾದಿಸಲ್ಪಡುತ್ತಿದ್ದರು. ಸಮಯದಲ್ಲಿ ಉಳಿಯ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀದೇವು ಮೂಲ್ಯಣ್ಣನವರ ಸ್ವಪ್ನದಲ್ಲಿ ಪ್ರತ್ಯಕ್ಷವಾಗಿ ತಾಯಿಯು ಕುತ್ತಾರಿನ ಮೂಲಮಣ್ಣಿಗೆ ತೆರಳಿ ಅಲ್ಲಿಯೇ ಧರ್ಮ ನಡಾವಳಿ ಉತ್ಸವವನ್ನು ಸ್ವೀಕರಿಸುತ್ತೇನೆಂದು ಸೂಚನೆ ನೀಡುತ್ತಾರೆ.
ಅದೇ ಪ್ರಕಾರ ತಾಯಿ ಆದಿಮಾಯೆ ರಕೇಶ್ವರಿ ಗ್ರಾಮಗಳಿಗೆ ಗ್ರಾಮದೇವತೆಯಾಗಿ, ಧರ್ಮಕ್ಕೆ ಧರ್ಮದೇವತೆಯಾಗಿ, ಮುಖ್ಯವಾಗಿ ಆರೋಗ್ಯಕ್ಕೆ ಧನ್ವಂತರಿಮಾತೆಯಾಗಿ ಹಾಗೂ ದೇವತಾರಾಧನೆ, ದೈವಾರಾಧನೆ, ನಾಗಾರಾಧನೆಯಲ್ಲಿ ಶಕ್ತಿಯಾಗಿ ಪ್ರಮುಖ ಆರಾಧನೆ ಪಡೆಯುತ್ತಿದ್ದಾರೆ.

All Rights Reserved.