Skip to content Skip to footer

ಕನ್ನಡಕೆರೆ

ತುಳುನಾಡಿನ ಹೆಚ್ಚಿನ ಕಡೆಗಳಲ್ಲಿ ಹರಿವ ನೀರ ಪಕ್ಕದಲ್ಲಿ ಅಥವಾ ಕೊಳದ ಸಮೀಪದಲ್ಲೇ ಪ್ರಕೃತಿದತ್ತವಾದ ಜಾಗದಲ್ಲಿ ಲೆಕ್ಕೇಸಿರಿಯ ಆರಾಧನೆ ನಡೆಯುವಂತೆ ಈ ಕ್ಷೇತ್ರಕ್ಕೆ ಸಂಬಂಧಿಸಿ ಕನ್ನಡಕೆರೆ ಎಂಬ ಬಹುಪುರಾತನ ಕೆರೆಯೂ ಸಮೀಪದಲ್ಲೇ (ಅಂದಾಜು 02 ಫರ್ಲಾಂಗು ದೂರದಲ್ಲಿ ) ಕಾಣಸಿಗುತ್ತದೆ. ಈ ಕೆರೆಯ ಒಳಗಡೆಯೇ ಎಳು ಸಣ್ಣ ಕೆರೆಗಳಿವೆ ಎಂದು ಹೇಳಲಾಗುತ್ತದೆ. ಈ ಕೆರೆಯು ನಮ್ಮ ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟಿದ್ದು ಹಲವಾರು ವಿಶಿಷ್ಟ ಸಂಗತಿಗಳನ್ನು ಒಳಗೊಂಡಿದೆ. ಈ ಕೆರೆಯಲ್ಲಿ ಹಿಂದೆ ಕಡಲಿನಂತೆ ಸೆರೆಗಳು ಎದ್ದು ಕೆರೆಯ ದಂಡೆಗೆ ಅಪ್ಪಳಿಸುತ್ತಿತ್ತಂತೆ. ಅಲ್ಲದೆ ಹಿಂದೆ ಕೆಮ್ಮುರೋಗ ಇದ್ದವರಿಗೆ ಈ ಕೆರೆಯಲ್ಲಿ ಸಿಗುತ್ತಿದ್ದ ವಿಶೇಷ ಚಿಪ್ಪುಗಳಿಂದ (ಪಚ್ಚಿಲೆ) ಮದ್ದು ತಯಾರಿಸಿದರೇ ರೋಗ ಗುಣವಾಗುತ್ತದೆ ಎಂದು ಹಿರಿಯರು ತಿಳಿಸಿರುತ್ತಾರೆ.ಒಟ್ಟಿನಲ್ಲಿ ಬಹು ವಿಶಿಷ್ಟವಾದ ಈ ಕೆರೆಯು ಇಂದು ಜೀರ್ಣಾವಸ್ಥೆಯಲ್ಲಿ ಪುನಃ ತನ್ನ ಪೂರ್ವದ ಸೊಬಗನ್ನು ಕಾಣಲು ಕಾತರಿಸುತ್ತಿದೆ.

ಶ್ರೀಕ್ಷೇತ್ರದ ಪುನ‌ರ್ ನಿರ್ಮಾಣ

ಅನಾದಿಯಲ್ಲಿ ಬಹುವೈಭವದಿಂದ ಆರಾಧನೆ ಪಡೆಯುತ್ತಿದ್ದ ಬೆರ್ಮೆರ್, ರಕ್ತಶ್ವರಿ ಮತ್ತು ಸಿರಿಗಳ ಸಾನಿಧ್ಯವು ಕಾಲಾನಂತರ ನಾಶವಾಗಿ ಜನಮಾನಸದಿಂದ ಕಣ್ಮರೆಯಾಗಿ ಹೋಯಿತು. ಈ ಸಿರಿಗಳ ದುಖಃವನ್ನು ಕಾಣಲಾಗದೆ ಕೊರಗಜ್ಜ ದೈವವೇ ಶ್ರೀಕ್ಷೇತ್ರದ ಪುನರ್ ನಿರ್ಮಾಣಕ್ಕೆ ಅಣಿಯಾಗಿ ಜೀರ್ಣೋದ್ಧಾರಕ್ಕಾಗಿ ಮುಂದಾಳತ್ವ ವಹಿಸುವುದಾಗಿ ಈಗಾಗಲೇ ಪ್ರಶ್ನಾಚಿಂತನೆಯಲ್ಲೂ ಕಂಡುಬಂದಿರುತ್ತದೆ. ಆ ಪ್ರಕಾರ ಊರಿನ ಭಕ್ತರೆಲ್ಲರೂ ಸೇರಿಕೊಂಡು ಕೊರಗಜ್ಜನ ಪ್ರೇರಣೆಯಂತೆ ಕ್ಷೇತ್ರದ ಪುನರ್ ನಿರ್ಮಾಣಕ್ಕೆ ಪಣತೊಡುತ್ತಾರೆ. ಅಂತೆಯೇ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಎಲ್ಲಾ ಶಕ್ತಿಗಳಿಗೆ ಅಂದರೆ :
  • ರಕ್ತಶ್ವರಿಗೆ ಮಾಡ
  • ಬೆರ್ಮರಿಗೆ ಮಾಡ
  • ಏಳೂರು ಸಿರಿಗಳಿಗೆ ಧರ್ಮಚಾವಡಿ
  • ಕುಮಾರನಿಗೆ ಅಶ್ವತ್ಥ ಮರದಡಿಯಲ್ಲಿ ಕಟ್ಟೆ
  • ನಂದಿಗೋಣನಿಗೆ ಮಾಡ
  • ಕೊರಗಜ್ಜ – ಗುಳಿಗಜ್ಜನಿಗೆ ಕಟ್ಟೆ
  • ನಾಗದೇವರಿಗೆ ಕಟ್ಟೆ
ಈ ರೀತಿ ಎಲ್ಲಾ ಶಕ್ತಿಗಳಿಗೆ ಸಾನಿಧ್ಯ ಕಲ್ಪಿಸಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಸಿ, ನಿತ್ಯ ಆರಾಧನೆ ಮಾಡುವುದೆಂದು ನಿರ್ಧರಿಸಲಾಗಿದೆ.
ಆ ನಿಟ್ಟಿನಲ್ಲಿ ಪೂರ್ವಾಭಾವಿಯಾಗಿ ಎಲ್ಲಾ ಶಕ್ತಿಗಳಿಗೆ ನೂತನವಾಗಿ ಆಲಯ ನಿರ್ಮಾಣಕ್ಕೆ ಯೋಗ್ಯಸ್ಥಳವನ್ನು ಗುರುತಿಸಿ ಎಲ್ಲಾ ಶಕ್ತಿಗಳನ್ನು ಬಾಲಾಲಯದಲ್ಲಿ ಇರಿಸಲಾಗಿರುತ್ತದೆ. ವಿಶೇಷವೆಂಬಂತೆ ಬಾಲಾಲಯ ಪ್ರತಿಷ್ಠಾ ದಿನದಿಂದ ಇಂದಿನವರೆಗೂ ಪ್ರತಿನಿತ್ಯ ನೂರಾರು ಭಕ್ತಾದಿಗಳು ದೂರದ ಊರುಗಳಿಂದಲೂ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀದೈವಗಳಲ್ಲಿ ಪ್ರಾರ್ಥನೆ ಸಲ್ಲಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡಿರುತ್ತಾರೆ.
ಪುನರ್ ನಿರ್ಮಾಣದ ಮುಂಚಿತವಾಗಿ ಮತ್ತು ಪ್ರಮುಖರ ಉಪಸ್ಥಿತಿಯಲ್ಲಿ ಹಿರಿಯರು ಶ್ರೀಕ್ಷೇತ್ರಕ್ಕೆ ಶಿಲಾನ್ಯಾಸ ಮಾಡಲಾಯಿತು. ಅಂದಿನಿಂದ ಹಂತ ಹಂತವಾಗಿ ಎಲ್ಲಾ ಜೀರ್ಣೋದ್ಧಾರ ಕಾರ್ಯಗಳನ್ನು ನಡೆಸಲಾಗುತ್ತಿದೆ. ಪ್ರಾರಂಭದಿಂದಲೂ ಜೀರ್ಣೋದ್ಧಾರ ಹಲವಾರು ಕಾರ್ಯದ ಸಂಕಷ್ಟಗಳು ಆಕ್ಷೇಪಗಳು ಬಂದರೂ ಅದೆಲ್ಲವೂ ದೈವಚಿತ್ತವೆಂಬಂತೆ ತಾನಾಗಿಯೇ ಸರಿಯಾಗಿ ನಿರ್ವಿಘ್ನವಾಗಿ ಎಲ್ಲಾ ಕಾರ್ಯಗಳು ಸಾಗುತ್ತಿವೆ.

All Rights Reserved.